ಸಾಮಾಜಿಕ ಜಾಲತಾಣಗಳಲ್ಲಿ ಶಾಲಿನಿ ಪಾಂಡೆ ಅವರದ್ದು ಎನ್ನಲಾದ ಎಐ ಸೃಷ್ಟಿತ ವಿಡಿಯೋವೊಂದು ವೈರಲ್ ಆಗಿದೆ. ಈ ವಿಡಿಯೋಗೂ ತಮಗೂ ಯಾವುದೇ ಸಂಬಂಧವಿಲ್ಲ ಎಂದು ನಟಿ ಸ್ಪಷ್ಟಪಡಿಸಿದ್ದಾರೆ. ತಮ್ಮ ಇನ್‌ಸ್ಟಾಗ್ರಾಮ್ ಖಾತೆಯಲ್ಲಿ ಈ ಕುರಿತು ಮಾಹಿತಿ ಹಂಚಿಕೊಂಡಿರುವ ಅವರು, ವೈರಲ್ ಆಗುತ್ತಿರುವ ವಿಡಿಯೋ ಸಂಪೂರ್ಣವಾಗಿ ನಕಲಿ ಮತ್ತು ಎಡಿಟ್ ಮಾಡಲಾಗಿದೆ ಎಂದು ತಿಳಿಸಿದ್ದಾರೆ.
ಅಂತರ್ಜಾಲದಲ್ಲಿ ಹರಿದಾಡುತ್ತಿರುವ ಎಐ ಸೃಷ್ಟಿತ ವಿಡಿಯೋಕ್ಕೂ ತಮಗೂ ಯಾವುದೇ ಸಂಬಂಧವಿಲ್ಲ ಎಂದು ಶಾಲಿನಿ ಪಾಂಡೆ ಹೇಳಿದ್ದಾರೆ. ತಂತ್ರಜ್ಞಾನವನ್ನು ದುರ್ಬಳಕೆ ಮಾಡಿಕೊಂಡು ವ್ಯಕ್ತಿಗಳನ್ನು ಗುರಿಯಾಗಿಸುವುದು ಆತಂಕಕಾರಿ ಬೆಳವಣಿಗೆ ಎಂದು ಹೇಳಿದ್ದಾರೆ.

ವಿಶೇಷವಾಗಿ ಮಹಿಳೆಯರನ್ನು ಗುರಿಯಾಗಿಸಿಕೊಂಡು ಇಂತಹ ನಕಲಿ ವಿಡಿಯೋಗಳನ್ನು ಸೃಷ್ಟಿಸಿ ಹಾನಿ ಮಾಡುತ್ತಿರುವುದು ಅತ್ಯಂತ ಕಳವಳಕಾರಿ ವಿಚಾರವಾಗಿದೆ ಎಂದು ನಟಿ ಹೇಳಿದ್ದಾರೆ. ತಂತ್ರಜ್ಞಾನವು ಜನರ ಜೀವನವನ್ನು ಸುಲಭಗೊಳಿಸಲು ಮತ್ತು ಸೃಜನಶೀಲತೆಗೆ ನೆರವಾಗಬೇಕೇ ಹೊರತು, ಮತ್ತೊಬ್ಬರ ಗೌರವಕ್ಕೆ ಧಕ್ಕೆ ತರುವ ರೀತಿಯಲ್ಲಿ ಬಳಕೆಯಾಗಬಾರದು ಎಂಬ ಸಂದೇಶವನ್ನು ನೀಡಿದ್ದಾರೆ.