ಮುಂಬೈ: ಇಲ್ಲಿನ ಜುಹು ಪ್ರದೇಶದಲ್ಲಿ ಬಾಲಿವುಡ್‌ ನಟ ಟೈಗರ್‌ ಶ್ರಾಫ್‌ (Tiger Shroff) ಕಾರಿನ ಮೇಲೆ ನಡೆದ ಗುಂಡಿನ ದಾಳಿ ಪ್ರಕರಣಕ್ಕೆ ಸಂಬಂಧಿಸಿದಂತೆ ಓರ್ವ ಅಪ್ರಾಪ್ತ ಸೇರಿ ಮೂವರು ಆರೋಪಿಗಳನ್ನ ಪೊಲೀಸರು ಬಂಧಿಸಿದ್ದಾರೆ.

ಗುಂಡಿನ ದಾಳಿ ಬಳಿಕ ತಲೆ ಮರೆಸಿಕೊಂಡಿದ್ದ 17, 18 ಹಾಗೂ 22 ವರ್ಷ ವಯಸ್ಸಿನ ಮೂವರು ಆರೋಪಿಗಳನ್ನ ‘ಆಂಟಿ-ಗ್ಯಾಂಗ್‌ಸ್ಟರ್ ಟಾಸ್ಕ್ ಫೋರ್ಸ್’ (ATF) ಮತ್ತು ರಾಜಸ್ಥಾನ ಪೊಲೀಸರು ಸೋಮವಾರ ಬಂಧಿಸಿದ್ದಾರೆ.

ಮುಂಬೈನಿಂದ (Mumbai) ದೆಹಲಿಯತ್ತ ರೈಲಿನಲ್ಲಿ (ರೈಲು ಸಂಖ್ಯೆ 12939) ಪ್ರಯಾಣಿಸುತ್ತಿದ್ದ ಈ ಆರೋಪಿಗಳನ್ನ ರಾಜಸ್ಥಾನದ ಕೋಟಾ ರೈಲು ನಿಲ್ದಾಣದಲ್ಲಿ ಪೊಲೀಸರು ವಶಕ್ಕೆ ಪಡೆದಿದ್ದಾರೆ. ಗುಂಡಿನ ದಾಳಿಯ ನಂತರ ಪರಾರಿಯಾಗಲು ಯತ್ನಿಸಿದ ಆರೋಪಿಗಳು, ವಸಾಯಿಯಲ್ಲಿ ರೈಲು ಹತ್ತಿದ್ದರು. ರೈಲು ಕೋಟಾ ನಿಲ್ದಾಣಕ್ಕೆ ಬಂದಾಗ ಈ ಮೂವರು ಆರೋಪಿಗಳನ್ನ ತಡೆಹಿಡಿಯಲಾಗಿದೆ.

12939 ಸಂಖ್ಯೆಯ ರೈಲು ‘ಪುಣೆ-ಜೈಪುರ ಸೂಪರ್‌ಫಾಸ್ಟ್ ಎಕ್ಸ್‌ಪ್ರೆಸ್’ ಆಗಿದ್ದು, ಪುಣೆ ಜಂಕ್ಷನ್‌ನಿಂದ ಜೈಪುರ ಜಂಕ್ಷನ್‌ ನಡುವೆ ಸಂಚರಿಸುತ್ತದೆ. ಈ ರೈಲು ಕಲ್ಯಾಣ ಜಂಕ್ಷನ್ ಮತ್ತು ವಸಾಯಿ ರಸ್ತೆಯಲ್ಲಿ ಸ್ಟಾಪ್‌ ಹೊಂದಿದ್ದು, ಗುಜರಾತ್ ಮತ್ತು ಮಧ್ಯಪ್ರದೇಶದ ಮೂಲಕ ಹಾದು ರಾಜಸ್ಥಾನವನ್ನ ಪ್ರವೇಶಿಸುತ್ತದೆ.