ಹುಬ್ಬಳ್ಳಿ: ಭಾರತೀಯರ ಸಂಸ್ಕೃತಿಯಲ್ಲಿ ಚಿನ್ನ ಕೇವಲ ಆಭರಣವಲ್ಲ, ಅದೊಂದು ಭಾವನೆ ಹಾಗೂ ಭವಿಷ್ಯದ ಭದ್ರತೆಯ ಸಂಕೇತ. ಇವತ್ತು ಪವಿತ್ರ ರಕ್ಷಾಬಂಧನ. ನೀವು ನಿಮ್ಮ ಅಣ್ಣ, ತಂಗಿ, ಅಕ್ಕ,ತಮ್ಮನಿಗೆ ಚಿನ್ನ ಅಥವಾ ಬೆಳ್ಳಿಯ ಆಭರಣ ಖರೀದಿಸುವ ಯೋಚನೆಯಲ್ಲಿದ್ದೀರಾ? ಹಾಗಾದರೆ ನಿಮಗೆಲ್ಲರಿಗೂ ಇಂದು ಭರ್ಜರಿ ಸಿಹಿಸುದ್ದಿ ಇಲ್ಲಿದೆ.

ಸತತ ಏರಿಕೆ ಕಂಡು ಗ್ರಾಹಕರ ಜೇಬು ಸುಡುತ್ತಿದ್ದ ಆಭರಣಗಳ ದರ ಇಂದು ಇಳಿಕೆಯಾಗಿದೆ. ಸಾಲು ಸಾಲು ಹಬ್ಬಗಳು ಹಾಗೂ ಮದುವೆ ಸೀಸನ್ ಶುರುವಾಗುತ್ತಿರುವ ಈ ಸಂದರ್ಭದಲ್ಲಿ ಬೆಲೆ ಇಳಿಕೆಯಾಗಿರುವುದು ಆಭರಣ ಪ್ರಿಯರ ಮುಖದಲ್ಲಿ ಮಂದಹಾಸ ಮೂಡಿಸಿದೆ. ವಿಶೇಷವಾಗಿ, ಬೆಂಗಳೂರಿನಲ್ಲಿ ಚಿನ್ನ, ಬೆಳ್ಳಿ ಬೆಲೆ ಕುಸಿತ ಕಂಡಿದ್ದು, ಆಭರಣ ಮಳಿಗೆಗಳಲ್ಲಿ ಗ್ರಾಹಕರ ಖರೀದಿ ಮತ್ತಷ್ಟು ಹೆಚ್ಚಾಗುವ ನಿರೀಕ್ಷೆಯಿದೆ.

ನಿನ್ನೆಯ ಮಾರುಕಟ್ಟೆ ದರಕ್ಕೆ ಹೋಲಿಸಿದರೆ ಇಂದು ಚಿನ್ನ ಹಾಗೂ ಬೆಳ್ಳಿ ದರದಲ್ಲಿ ಭಾರೀ ಇಳಿಕೆ ಕಂಡುಬಂದಿರುವುದು ಸ್ಪಷ್ಟವಾಗಿದೆ. ನಿನ್ನೆ 22 ಕ್ಯಾರಟ್‌ನ 1 ಗ್ರಾಂ ಚಿನ್ನದ ಬೆಲೆ 14,940 ರೂ. ಇತ್ತು, ಇಂದು ಅದು 290 ರೂಪಾಯಿ ಕುಸಿದು 14,650 ರೂಪಾಯಿಗೆ ತಲುಪಿದೆ. ಅದೇ ರೀತಿ 24 ಕ್ಯಾರಟ್ ಅಪರಂಜಿ ಚಿನ್ನ ನಿನ್ನೆ 16,298 ರೂಪಾಯಿ ಇತ್ತು, ಇಂದು 316 ರೂಪಾಯಿ ಇಳಿಕೆಯಾಗಿ 15,982 ರೂಪಾಯಿಗೆ ಮಾರಾಟವಾಗುತ್ತಿದೆ.