ಬಿಗ್ ಬಾಸ್ ಕನ್ನಡ ಸೀಸನ್ 13’ (Bigg Boss Kannada Season 13) ಶೋ ಆರಂಭಕ್ಕೆ ದಿನಗಣನೆ ಶುರುವಾಗಿದೆ. ಈ ಬಾರಿ ಕೂಡ ಜಾಲಿವುಡ್ ಸ್ಟುಡಿಯೋದಲ್ಲಿ ಬಿಗ್ ಬಾಸ್ ನಡೆಯಬೇಕಿದೆ. ಕಿಚ್ಚ ಸುದೀಪ್ (Kichcha Sudeep) ಅವರು ಶೋ ನಿರೂಪಣೆ ಮಾಡಲು ಸಜ್ಜಾಗಿದ್ದಾರೆ. ಆದರೆ ಕಳೆದ ಸೀಸನ್ ವೇಳೆ ಉಂಟಾದ ವಿವಾದದಿಂದ ಈ ಬಾರಿ ಸರ್ಕಾರದ ಅನುಮತಿ ಇನ್ನೂ ಸಿಕ್ಕಿಲ್ಲ. ಬೆಂಗಳೂರಿನಲ್ಲಿ ನಡೆದ ಸುದ್ದಿಗೋಷ್ಠಿ ವೇಳೆ ಮಾತನಾಡಿದ ಅರಣ್ಯ ಸಚಿವ ರಾಮಲಿಂಗಾ ರೆಡ್ಡಿ (Ramalinga Reddy) ಅವರು ಬಿಗ್ ಬಾಸ್ ಕುರಿತ ಪ್ರಶ್ನೆಗೆ ಉತ್ತರ ನೀಡಿದರು.

ಅರಣ್ಯ, ಪರಿಸರ ಹಾಗೂ ಜೀವಿಶಾಸ್ತ್ರ ಇಲಾಖೆಯ ಪ್ರಗತಿ ಪರಿಶೀಲನಾ ಸಭೆಯಲ್ಲಿ ಸಚಿವ ರಾಮಲಿಂಗಾ ರೆಡ್ಡಿ ಅವರು ಮಾತನಾಡಿದರು. ‘ಬಿಗ್ ಬಾಸ್ ಶೋ ನಡೆಸಲು ಇನ್ನೂ ಅನುಮತಿ ಕೊಟ್ಟಿಲ್ಲ. ಅನುಮತಿ ಕೇಳಿದ್ದಾರಾ ಅಂತ ತಿಳಿದುಕೊಂಡು ಹೇಳುತ್ತೇನೆ’ ಎಂದಿದ್ದಾರೆ ರಾಮಲಿಂಗಾ ರೆಡ್ಡಿ. ‘ಬಿಗ್ ಬಾಸ್ ಆಯೋಜಕರು ಒಂದು ವೇಳೆ ನಿಯಮ ಮೀರಿದರೆ ದಂಡ ಹಾಕಿ’ ಎಂದು ಕೂಡ ಅವರು ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.

ಸೆಪ್ಟೆಂಬರ್ 6ರಂದು ‘ಬಿಗ್ ಬಾಸ್ ಕನ್ನಡ ಸೀಸನ್ 13’ ಆರಂಭಿಸಲು ದಿನಾಂಕ ನಿಗದಿ ಮಾಡಲಾಗಿದೆ. ಈಗಾಗಲೇ ಸುದೀಪ್ ಅವರ ಪ್ರೋಮೋಗಳು ಬಿಡುಗಡೆ ಆಗಿ ಗಮನ ಸೆಳೆದಿವೆ. ಯಾವೆಲ್ಲ ಸ್ಪರ್ಧಿಗಳು ಈ ಬಾರಿ ದೊಡ್ಮನೆಗೆ ಕಾಲಿಡುತ್ತಾರೆ ಎಂಬುದನ್ನು ತಿಳಿಯುವ ಕುತೂಹಲ ಮೂಡಿದೆ. ಇಂಥ ಸಂದರ್ಭದಲ್ಲಿ ಸರ್ಕಾರದ ಅನುಮತಿ ಪಡೆದಿಲ್ಲ ವಿಷಯ ತಿಳಿದು ಅಚ್ಚರಿ ಆಗಿದೆ.