ಬಾಗಲಕೋಟೆ: ಜಿಲ್ಲಾ ಆರೋಗ್ಯ ಇಲಾಖೆಯಲ್ಲಿ ಗಂಭೀರ ಸ್ವರೂಪದ ಅಕ್ರಮವೊಂದು ಬೆಳಕಿಗೆ ಬಂದಿದ್ದು, ಪ್ರಭಾವಿ ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳ ಕೃಪಾಕಟಾಕ್ಷದಿಂದ ಸರಕಾರಿ ನಿಯಮಗಳನ್ನು ಗಾಳಿಗೆ ತೂರಲಾಗಿದೆ ಎಂಬ ಆರೋಪ ಕೇಳಿಬಂದಿದೆ. ಬಾಗಲಕೋಟೆ ಶಾಸಕ ಉಮೇಶ್ ಮೇಟಿ ಅವರ ಸೊಸೆ ಹಾಗೂ ಪ್ರಸ್ತುತ ಜಿಲ್ಲಾ ಆರೋಗ್ಯ ಅಧಿಕಾರಿ (ಡಿಹೆಚ್ಓ) ಡಾ. ರಾಜಕುಮಾರ ಯರಗಲ್ ಅವರ ಪುತ್ರಿ ಡಾ. ಅಂಕಿತಾ ಯರಗಲ್ ವಿರುದ್ಧ ಈ ಗಂಭೀರ ಅಕ್ರಮದ ಆರೋಪ ಕೇಳಿಬಂದಿದೆ.

ಖಾಸಗಿ ಕಾಲೇಜಿನಲ್ಲಿ MD ಓದುತ್ತಾ ಸರಕಾರಿ ಕ್ಲಿನಿಕ್‌ನಿಂದ 75 ಸಾವಿರ ವೇತನ!

2025 ರಲ್ಲಿ ವಾಂಬೆ ಕಾಲೋನಿಯ ‘ನಮ್ಮ ಕ್ಲಿನಿಕ್’ನಲ್ಲಿ ವೈದ್ಯಾಧಿಕಾರಿಯಾಗಿ ನೇಮಕಗೊಂಡಿದ್ದ ಡಾ. ಅಂಕಿತಾ, 2026 ರ ಮಾರ್ಚ್‌ನಲ್ಲಿ ಬಾಗಲಕೋಟೆಯ ಎಸ್.ಎನ್. ಮೆಡಿಕಲ್ ಕಾಲೇಜಿನಲ್ಲಿ ಎಂಡಿ (MD) ಪ್ಯಾಥಾಲಜಿ ಕೋರ್ಸ್‌ಗೆ ಪ್ರವೇಶ ಪಡೆದಿದ್ದರು. ಏಪ್ರಿಲ್‌ನಿಂದ ತರಗತಿಗಳು ಆರಂಭವಾಗಿದ್ದರೂ, ಅವರು ನಮ್ಮ ಕ್ಲಿನಿಕ್‌ಗೆ ಸರಿಯಾಗಿ ಹಾಜರಾಗದೆ ಮೆಡಿಕಲ್ ಕಾಲೇಜಿನಲ್ಲಿ ವಿದ್ಯಾಭ್ಯಾಸ ಮುಂದುವರಿಸುತ್ತಿದ್ದರು. ಸರಕಾರಿ ನಿಯಮಾವಳಿ ಪ್ರಕಾರ ಪೂರ್ಣಾವಧಿ ಎಂಡಿ ವ್ಯಾಸಂಗ ಮಾಡುತ್ತಿರುವಾಗ ಸರಕಾರಿ ವೈದ್ಯೆಯಾಗಿ ಕರ್ತವ್ಯ ನಿರ್ವಹಿಸಿ ವೇತನ ಪಡೆಯುವುದು ಕಾನೂನುಬಾಹಿರ. ಆದಾಗ್ಯೂ, ಪ್ರತಿ ತಿಂಗಳು 75,000 ರೂ. ಸರಕಾರಿ ವೇತನ ಪಡೆಯುತ್ತಿದ್ದರು ಎಂಬ ಸತ್ಯ ಆರೋಗ್ಯ ಇಲಾಖೆಯ ಬ್ಯಾಂಕ್ ಖಾತೆ ದಾಖಲೆಗಳಿಂದ ಬಹಿರಂಗವಾಗಿದೆ.

ಬಂದ್ ಆದ ಸ್ಥಿತಿಯಲ್ಲಿ ಕ್ಲಿನಿಕ್

ಬೆಳಿಗ್ಗೆ 9 ರಿಂದ ಸಂಜೆ 4:30 ರವರೆಗೆ ಕ್ಲಿನಿಕ್‌ನಲ್ಲಿ ಇರಬೇಕಾದ ವೈದ್ಯಾಧಿಕಾರಿ ಇಲ್ಲದ ಕಾರಣ ವಾಂಬೆ ಕಾಲೋನಿಯ ‘ನಮ್ಮ ಕ್ಲಿನಿಕ್’ ಬಹುತೇಕ ಬಂದ್ ಆದ ಸ್ಥಿತಿಯಲ್ಲಿದೆ. ಮಗಳು ಎಂಬ ಕಾರಣಕ್ಕೆ ಡಿಹೆಚ್‌ಒ ರಾಜಕುಮಾರ ಯರಗಲ್ ಎಲ್ಲವೂ ತಿಳಿದಿದ್ದರೂ ಕಣ್ಮುಚ್ಚಿ ಕುಳಿತಿದ್ದಾರೆ ಎಂಬ ಆಕ್ರೋಶ ಸಾರ್ವಜನಿಕ ವಲಯದಲ್ಲಿ ವ್ಯಕ್ತವಾಗಿದೆ.

ಅಧಿಕಾರಿಗಳ ಸ್ಪಷ್ಟನೆ

ಈ ಕುರಿತು ಪ್ರತಿಕ್ರಿಯಿಸಿರುವ ಡಿಹೆಚ್ಓ ಡಾ. ರಾಜಕುಮಾರ ಯರಗಲ್, “ಈ ನೇಮಕಾತಿ ಹಿಂದಿನ ಡಿಹೆಚ್ಓ ಮಂಜುನಾಥ ದೊಡ್ಡೇರಿ ಅವಧಿಯಲ್ಲಿ ನಡೆದಿದ್ದು, ಪ್ರಸ್ತುತ ಡಾ. ಅಂಕಿತಾ ಅವರ ವೇತನವನ್ನು ತಡೆಹಿಡಿಯಲಾಗಿದೆ,” ಎಂದು ಸಮಜಾಯಿಷಿ ನೀಡಿದ್ದಾರೆ. ಮತ್ತೊಂದೆಡೆ ತಾಲೂಕು ಆರೋಗ್ಯಾಧಿಕಾರಿ (THO) ಸರಸ್ವತಿ ಮಾಗಿ ಮಾತನಾಡಿ, “ವೈದ್ಯರು ಎಂಡಿ ಓದುತ್ತಿರುವ ಬಗ್ಗೆ ನಮಗೆ ಮಾಹಿತಿ ಇರಲಿಲ್ಲ, ಈ ಕುರಿತು ವಿಚಾರಣೆ ನಡೆಸಿ ನೋಟಿಸ್ ನೀಡಲಾಗುವುದು,” ಎಂದು ತಿಳಿಸಿದ್ದಾರೆ.