ಸಿಲಿಕಾನ್ ಸಿಟಿಯಲ್ಲಿ (bengaluru) ಈಗಿದ್ದ ವಾತಾವರಣ ಮತ್ತೊಂದು ಗಂಟೆಗೆ ಇರುವುದಿಲ್ಲ. ಬಿಟ್ಟು ಬಿಟ್ಟು ಸುರಿಯುತ್ತಿರುವ ಮಳೆ, ಏಕಾಏಕಿ ಬೀಸುವ ತಣ್ಣನೆಯ ಗಾಳಿ ಹಾಗೂ ಬಿಸಿಲು-ಚಳಿಯ ಏರುಪೇರಿನಿಂದಾಗಿ ರಾಜಧಾನಿಯ ಜನರ ಆರೋಗ್ಯದಲ್ಲಿ ಏರುಪೇರಾಗುತ್ತಿದೆ. ದೇಶದಲ್ಲಿ ಹೆಚ್​​1ಎನ್​​1 (H1N1) ಆತಂಕದ ನಡುವೆಯೇ ಬೆಂಗಳೂರಿನಲ್ಲಿ ಹವಾಮಾನ ವೈಪರೀತ್ಯದಿಂದಾಗಿ ಮಕ್ಕಳು ಹಾಗೂ ಹಿರಿಯರಲ್ಲಿ ಜ್ವರ, ಉಸಿರಾಟದ ಸೋಂಕು ಮತ್ತು ವೈರಲ್ ಫ್ಲೂ ಬಾಧೆ ತೀವ್ರವಾಗಿ ಹೆಚ್ಚಾಗುತ್ತಿದ್ದು, ಆಸ್ಪತ್ರೆಗಳಿಗೆ ದಾಖಲಾಗುವವರ ಸಂಖ್ಯೆ ಏರಿಕೆಯಾಗುತ್ತಿದೆ.

ಒಂದೇ ವಾರದಲ್ಲಿ ಸಾವಿರಾರು ಪ್ರಕರಣ ದಾಖಲು

ರಾಜಧಾನಿ ಬೆಂಗಳೂರು ಸೇರಿದಂತೆ ರಾಜ್ಯಾದ್ಯಂತ ಕಳೆದ ಕೇವಲ ಒಂದು ವಾರದಲ್ಲಿ ಸಾಂಕ್ರಾಮಿಕ ರೋಗಗಳ ಸಂಖ್ಯೆಯಲ್ಲಿ ಗಣನೀಯ ಏರಿಕೆ ಕಂಡುಬಂದಿದೆ. 571 ಜನರಲ್ಲಿ ವೈರಲ್ ಇನ್‌ಫ್ಲುಯೆಂಜಾ ದೃಢಪಟ್ಟಿದೆ. 344 ಜನರಲ್ಲಿ ಸಾರಿ (SARI – ತೀವ್ರ ಉಸಿರಾಟದ ಸೋಂಕು) ಪ್ರಕರಣಗಳು ಪತ್ತೆಯಾಗಿವೆ. 3,232 ಜನರಲ್ಲಿ ಎಡಿಡಿ (ADD – ವಾಂತಿಭೇದಿ) ಕಾಣಿಸಿಕೊಂಡಿದೆ. ನಗರದ ಪ್ರಮುಖ ಆಸ್ಪತ್ರೆಗಳಲ್ಲಿ ಮಕ್ಕಳ ವೈರಲ್ ಕಾಯಿಲೆಗಳ ಪ್ರಮಾಣ ಶೇಕಡಾ 10 ರಿಂದ 15 ರಷ್ಟು ಹೆಚ್ಚಳವಾಗಿದೆ.

ಶಾಲಾ ಮಕ್ಕಳಲ್ಲಿ ವೇಗವಾಗಿ ಹರಡುತ್ತಿದೆ ಫ್ಲೂ

ಹವಾಮಾನ ವೈಪರೀತ್ಯದ ಪರಿಣಾಮ ಪುಟ್ಟ ಮಕ್ಕಳ ಮೇಲೆ ನೇರವಾಗಿ ಬೀಳುತ್ತಿದ್ದು, ಶಾಲಾ ಮಕ್ಕಳಲ್ಲಿ ಜ್ವರ, ಕೆಮ್ಮು, ನೆಗಡಿ ಒಬ್ಬರಿಂದ ಒಬ್ಬರಿಗೆ ಅತಿ ವೇಗವಾಗಿ ಹರಡುತ್ತಿದೆ. ಈ ಹಿನ್ನೆಲೆಯಲ್ಲಿ ಪೋಷಕರು ಮಕ್ಕಳ ಆರೋಗ್ಯದ ಮೇಲೆ ಹೆಚ್ಚಿನ ನಿಗಾ ಇಡಬೇಕೆಂದು ವೈದ್ಯರು ಸೂಚಿಸಿದ್ದಾರೆ. ಜ್ವರ ಅಥವಾ ನೆಗಡಿಯ ಗುಣಲಕ್ಷಣಗಳು ಕಂಡುಬಂದರೆ ಮಕ್ಕಳನ್ನು ಯಾವುದೇ ಕಾರಣಕ್ಕೂ ಶಾಲೆಗೆ ಕಳುಹಿಸಬಾರದು ಮತ್ತು ಸೋಂಕು ಕಡಿಮೆಯಾಗುವವರೆಗೂ ಇತರ ಮಕ್ಕಳ ಸಂಪರ್ಕಕ್ಕೆ ಬಾರದಂತೆ ನೋಡಿಕೊಳ್ಳುವಂತೆ ಮನವಿ ಮಾಡಿದ್ದಾರೆ.