ಬಳ್ಳಾರಿ, ಸೆ.5: ನಗರದ 23ನೇ ವಾರ್ಡ್‌ನ ಮಹಾನಂದಿ ಕೊಟ್ಟಂ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಶಿಕ್ಷಕರಾ ದಿನಾಚರಣೆಯನ್ನು ಸಂಭ್ರಮದಿಂದ ಆಚರಿಸಲಾಯಿತು.

ಕಾರ್ಯಕ್ರಮಕ್ಕೆ ಸರ್ವಪಲ್ಲಿ ರಾಧಾಕೃಷ್ಣನ್ ಅವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡುವ ಮೂಲಕ ಶಾಲೆಯ ಮುಖ್ಯ ಶಿಕ್ಷಕಿ ಸಿದ್ದಲಿಂಗಮ್ಮ ಎಲ್. ಚಾಲನೆ ನೀಡಿದರು.

 ಬಳಿಕ 6ನೇ ತರಗತಿಯ ವಿದ್ಯಾರ್ಥಿನಿ ರಾಜೇಶ್ವರಿ ಪ್ರಾರ್ಥನಾ ಗೀತೆಯನ್ನು ಹಾಡಿದರು.

ಈ ಸಂದರ್ಭದಲ್ಲಿ ಮಾತನಾಡಿದ ಎಸ್.ಡಿ.ಎಂ.ಸಿ ಅಧ್ಯಕ್ಷ ಉಪೇಂದ್ರ, “ಶಿಕ್ಷಕರು ಮಕ್ಕಳಿಗೆ ವಿದ್ಯೆ ಕಲಿಸುವುದರ ಜೊತೆಗೆ ಉತ್ತಮ ಸಂಸ್ಕಾರ, ಶಿಸ್ತು ಹಾಗೂ ಜೀವನ ಮೌಲ್ಯಗಳನ್ನು ಬೆಳೆಸುವಲ್ಲಿ ಪ್ರಮುಖ ಪಾತ್ರ ವಹಿಸುತ್ತಾರೆ. 

ವಿದ್ಯಾರ್ಥಿಗಳ ಭವಿಷ್ಯವನ್ನು ಉತ್ತಮವಾಗಿ ರೂಪಿಸುವಲ್ಲಿ ಶಿಕ್ಷಕರ ಸೇವೆ ಅತ್ಯಂತ ಮಹತ್ವದ್ದಾಗಿದೆ. ಶಿಕ್ಷಕರನ್ನು ಗೌರವಿಸುವುದು ಪ್ರತಿಯೊಬ್ಬರ ಕರ್ತವ್ಯವಾಗಿದೆ” ಎಂದು ಹೇಳಿದರು.

ಬಡ್ತಿ ಮುಖ್ಯ  ಶಿಕ್ಷಕಿ ಸಿದ್ದಲಿಂಗಮ್ಮ ಎಲ್. ಮಾತನಾಡಿ, “ಶಿಕ್ಷಕರ ವೃತ್ತಿ ಅತ್ಯಂತ ಪವಿತ್ರವಾದದ್ದು. ಮಕ್ಕಳ ಪ್ರತಿಭೆಯನ್ನು ಗುರುತಿಸಿ, ಅವರಿಗೆ ಉತ್ತಮ ಶಿಕ್ಷಣ ಮತ್ತು ಮಾರ್ಗದರ್ಶನ ನೀಡುವ ಮೂಲಕ ಸಮಾಜಕ್ಕೆ ಉತ್ತಮ ಪ್ರಜೆಗಳನ್ನು ರೂಪಿಸುವ ಜವಾಬ್ದಾರಿ ಶಿಕ್ಷಕರ ಮೇಲಿದೆ. ಸರ್ವಪಲ್ಲಿ ರಾಧಾಕೃಷ್ಣನ್ ಅವರ ಆದರ್ಶಗಳನ್ನು ಎಲ್ಲರೂ ಪಾಲಿಸಬೇಕು” ಎಂದು ಹೇಳಿದರು.

ಸಹ ಶಿಕ್ಷಕಿ ಪ್ರಮೀಳಾ ಬಾಯಿ.ಎಂ. ಮಾತನಾಡಿ, “ಶಿಕ್ಷಕರು ಸಮಾಜದ ಭವಿಷ್ಯವನ್ನು ರೂಪಿಸುವ ಪ್ರಮುಖ ವ್ಯಕ್ತಿಗಳಾಗಿದ್ದಾರೆ.

 ವಿದ್ಯಾರ್ಥಿಗಳಿಗೆ ಪಠ್ಯ ಜ್ಞಾನದ ಜೊತೆಗೆ ಉತ್ತಮ ನಡತೆ, ಮಾನವೀಯ ಮೌಲ್ಯಗಳು ಹಾಗೂ ದೇಶಾಭಿಮಾನವನ್ನು ಬೆಳೆಸುವ ಜವಾಬ್ದಾರಿ ಶಿಕ್ಷಕರ ಮೇಲಿದೆ. ಪ್ರತಿಯೊಬ್ಬ ವಿದ್ಯಾರ್ಥಿಯಲ್ಲಿರುವ ಪ್ರತಿಭೆಯನ್ನು ಗುರುತಿಸಿ ಪ್ರೋತ್ಸಾಹಿಸುವ ಮೂಲಕ ಅವರನ್ನು ಉತ್ತಮ ನಾಗರಿಕರನ್ನಾಗಿ ರೂಪಿಸಬೇಕು” ಎಂದು ಹೇಳಿದರು. 

ಈ ಕಾರ್ಯಕ್ರಮದಲ್ಲಿ ಸಹ ಶಿಕ್ಷಕಿಯರಾದ ಎಂ. ಪ್ರಮೀಳಾ ಬಾಯಿ, ನೇತ್ರಾ, ಭಾರ್ಗವಿ,  ಶಿಕ್ಷಣ ಪ್ರೇಮಿಗಳಾದ ಲಕ್ಷ್ಮಣ.ಎಸ್ ಭಂಡಾರಿ , ಅಡುಗೆ ಸಹಾಯಕಿಯರಾದ ಗೌರಮ್ಮ, ರುದ್ರಮ್ಮ ಹಾಗೂ ಶಾಲೆಯ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.