ಬೆಂಗಳೂರು: ರಾಜ್ಯ ರಾಜಧಾನಿ ಸೇರಿದಂತೆ ಹಲವು ಕಡೆ ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಇಲಾಖೆ ಆಹಾರ ಉತ್ಪನ್ನಗಳಲ್ಲಿ ಕಲಬೆರಕೆಯಾಗಿರುವುದನ್ನು ಪತ್ತೆ ಮಾಡಿ, ಬ್ಯಾನ್ ಮಾಡುತ್ತಿದೆ. ಇದರ ಜತೆಗೆ ಹೋಟೆಲ್, ರೆಸ್ಟೋರೆಂಟ್​ಗಳ ಮೇಲೆ ದಾಳಿ ಮಾಡಿದೆ. ರಾಜ್ಯದ ಹಲವು ಕಡೆ ಅಧಿಕಾರಿಗಳು ಬಿರುಸಿನ ಕಾರ್ಯಚರಣೆ ಮಾಡುತ್ತಿದೆ. ಇನ್ನು ಇತ್ತಿಚೇಗೆ ಕಳಪೆ ಮಟ್ಟದ ಇಂಗು (Asafoetida) ಮಾರಾಟದ ವಿರುದ್ಧ ಕ್ರಮವನ್ನು ತೆಗೆದುಕೊಂಡ ಬೆನ್ನಲ್ಲೇ, ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಇಲಾಖೆ (FDA) ಇದೀಗ ಮಸಾಲೆ ಪದಾರ್ಥಗಳು ಹಾಗೂ ಮಸಾಲೆ ಪೌಡರ್‌ಗಳ ಮೇಲೆ ತೀವ್ರ ಕಣ್ಣಿಟ್ಟಿದೆ. ಮಾರುಕಟ್ಟೆಯಲ್ಲಿ ಲಭ್ಯವಿರುವ ವಿವಿಧ ಬ್ರ್ಯಾಂಡ್‌ಗಳ ಮಸಾಲೆ ಉತ್ಪನ್ನಗಳಲ್ಲಿ ಅಪಾಯಕಾರಿ ರಾಸಾಯನಿಕಗಳು ಹಾಗೂ ಕೃತಕ ಬಣ್ಣಗಳನ್ನು ಬಳಸಲಾಗುತ್ತಿದೆ ಎಂಬ ಆರೋಪ ಕೇಳಿಬಂದ ಹಿನ್ನೆಲೆಯಲ್ಲಿ ಇಲಾಖೆ ಈ ನಿರ್ಧಾರಕ್ಕೆ ಬಂದಿದೆ.

ಮಸಾಲೆ ಪದಾರ್ಥಗಳಲ್ಲಿ ಇಥಿಲೀನ್ ಆಕ್ಸೈಡ್ (ETO) ನಂತಹ ಅಪಾಯಕಾರಿ ಕೆಮಿಕಲ್ ಬಳಕೆಯಾಗುತ್ತಿರುವ ಶಂಕೆ ವ್ಯಕ್ತವಾಗಿದ್ದು, ಬಳಕೆಗೆ ಸ್ಪಷ್ಟ ಹಾಗೂ ಕಠಿಣ ಮಾನದಂಡಗಳನ್ನು ರೂಪಿಸುವಂತೆ ರಾಜ್ಯ ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಇಲಾಖೆಯು ಕೇಂದ್ರ FSSAIಗೆ ಮನವಿ ಸಲ್ಲಿಸಿದೆ. ರಾಜ್ಯದ ಮನವಿ ಹಾಗೂ ದೂರುಗಳ ಬೆನ್ನಲ್ಲೇ ಕೇಂದ್ರ ಆಹಾರ ಅಭಿವೃದ್ಧಿ ಮಂಡಳಿ ಮತ್ತು FSSAI ಸಹ ಈ ವಿಚಾರದಲ್ಲಿ ಹೈಅಲರ್ಟ್ ಆಗಿವೆ.

ಪ್ರಮುಖವಾಗಿ ಎವರೆಸ್ಟ್ ಹಾಗೂ ಎಲ್‌ಜಿ ಕಂಪನಿಗಳ ಇಂಗು ಉತ್ಪನ್ನಗಳಲ್ಲಿ ಶೇಕಡಾವಾರು ಆಲ್ಕೋಹಾಲ್ ಸೋಲ್ಯುಬಲ್ ಪ್ರಮಾಣ ಕಡಿಮೆಯಿದ್ದು, ಕಳಪೆ ಗುಣಮಟ್ಟ ಕಂಡುಬಂದಿದ್ದರಿಂದ ಅವುಗಳ ಮಾರಾಟ ಹಾಗೂ ಉತ್ಪಾದನೆಗೆ ನಿಷೇಧ ಹೇರಲಾಗಿತ್ತು. ಈ ಘಟನೆ ಆಹಾರ ವಲಯದಲ್ಲಿ ದೊಡ್ಡ ಸಂಚಲನ ಮೂಡಿಸಿತ್ತು. ಇದೀಗ ರಾಜ್ಯದ ಮಾರುಕಟ್ಟೆಯಲ್ಲಿ ಸಿಗುವ ಸಾಂಬಾರ್ ಪೌಡರ್, ಗರಂ ಮಸಾಲೆ, ಚಿಕನ್ ಮಸಾಲೆ, ಅರಿಶಿನ ಹಾಗೂ ಖಾರದ ಪುಡಿ ಸೇರಿದಂತೆ ಪ್ರಮುಖ ಮಸಾಲೆ ಉತ್ಪನ್ನಗಳ ಸ್ಯಾಂಪಲ್‌ಗಳನ್ನು ಪ್ರತ್ಯೇಕವಾಗಿ ಸಂಗ್ರಹಿಸಲು ಅಧಿಕಾರಿಗಳು ಸಜ್ಜಾಗಿದ್ದಾರೆ.