ಪರೀಕ್ಷೆ ನಡೆದ ದಿನವೇ ಒಎಂಆರ್ ಪ್ರತಿಗಳ ಸ್ಕ್ಯಾನ್ ಮತ್ತು ಅಪ್‌ಲೋಡ್ ಮಾಡಲಾಗಿತ್ತು. ಸೆ.7ರಂದು ಕೀ ಉತ್ತರ ಬಿಡುಗಡೆಯಾಗಿದ್ದು, ಸೆ.9ರವರೆಗೆ ಆಕ್ಷೇಪಣೆ ಸಲ್ಲಿಸಲು ಅವಕಾಶ ನೀಡಲಾಗಿದೆ. ಸೆ.10ರಂದು ಪರಿಷ್ಕೃತ ಕೀ ಉತ್ತರ ಪ್ರಕಟಗೊಳಿಸಲಾಗಿದ್ದು, ಸೆ.14ರ ಸಂಜೆ 5.30ರವರೆಗೆ ಫಲಿತಾಂಶಕ್ಕೆ ಆಕ್ಷೇಪಣೆ ಸಲ್ಲಿಸಲು ಅವಕಾಶ ಕಲ್ಪಿಸಲಾಗಿದೆ. ಪೂರಕ ದಾಖಲೆಗಳೊಂದಿಗೆ ನಿಗದಿತ ಲಿಂಕ್‌ನಲ್ಲಿ ಆಕ್ಷೇಪಣೆ ಸಲ್ಲಿಸಲು ಕರ್ನಾಟಕ ಪರೀಕ್ಷಾ ಪ್ರಾಧಿಕಾರ ಸೂಚನೆ ನೀಡಿದೆ.

ಫಲಿತಾಂಶ ಪರಿಶೀಲಿಸುವುದು ಹೇಗೆ?

ಕೆಇಎ ಅಧಿಕೃತ ವೆಬ್‌ಸೈಟ್ cetonline.karnataka.gov.in/kea ಗೆ ಭೇಟಿ ನೀಡಿ.

ಮುಖಪುಟದಲ್ಲಿ ಸಂಬಂಧಿಸಿದ ಪೊಲೀಸ್ ಕಾನ್ಸ್‌ಟೇಬಲ್ ಲಿಖಿತ ಪರೀಕ್ಷೆಯ ಫಲಿತಾಂಶದ ಲಿಂಕ್ (CAR/DAR) ಮೇಲೆ ಕ್ಲಿಕ್ ಮಾಡಿ. ನಂತರ ನಿಮ್ಮ ಅರ್ಜಿ ಸಂಖ್ಯೆ ಮತ್ತು ಜನ್ಮ ದಿನಾಂಕವನ್ನು ನಮೂದಿಸಿ ಲಾಗಿನ್ ಆಗಿ. ಬಳಿಕ ನಿಮ್ಮ ಸ್ಕೋರ್‌ಕಾರ್ಡ್ ಪರದೆಯ ಮೇಲೆ ಕಾಣಿಸಲಿದ್ದು, ಅದನ್ನು ಡೌನ್‌ಲೋಡ್ ಮಾಡಿ ಪ್ರಿಂಟ್ ತೆಗೆದುಕೊಳ್ಳಬಹುದು.

ಯುಜಿ ನೀಟ್ 2ನೇ ಸುತ್ತಿನ ಸೀಟು ಹಂಚಿಕೆ ಫಲಿತಾಂಶ ಪ್ರಕಟ

ಮತ್ತೊಂದೆಡೆ, ಯುಜಿ ನೀಟ್ 2ನೇ ಸುತ್ತಿನ ಸೀಟು ಹಂಚಿಕೆ ಫಲಿತಾಂಶ ಪ್ರಕಟವಾಗಿದೆ. ವೈದ್ಯಕೀಯದಲ್ಲಿ 384 ಸೀಟುಗಳು ಇನ್ನೂ ಬಾಕಿ ಉಳಿದಿದ್ದು, 12,010 ವೈದ್ಯಕೀಯ ಸೀಟುಗಳ ಪೈಕಿ 11,626 ಸೀಟು ಹಂಚಿಕೆ ಮಾಡಲಾಗಿದೆ. ಮ್ಯಾನೇಜ್‌ಮೆಂಟ್ ಕೋಟಾದ 384 ಸೀಟುಗಳು ಉಳಿಸಿಕೊಳ್ಳಲಾಗಿದೆ.

ದಂತ ವೈದ್ಯಕೀಯದ ಎಲ್ಲ 2,689 ಸೀಟುಗಳೂ ಹಂಚಿಕೆ ಮಾಡಲಾಗಿದ್ದು, ಎಂಸಿಸಿ ಮತ್ತು ಕೆಇಎ ಎರಡರಲ್ಲೂ ಸೀಟು ಪಡೆದವರಿಗೆ ವಿಶೇಷ ಅವಕಾಶ ಕಲ್ಪಿಸಲಾಗಿದೆ. ಎಂಸಿಸಿ ಸೀಟು ಪಡೆಯಲು ಬಯಸಿದರೆ ಸೆಪ್ಟೆಂಬರ್ 14ರ ಸಂಜೆ 5 ರವರೆಗೆ ಚಾಯ್ಸ್-4 ಆಯ್ಕೆ ಮಾಡಲು ಅವಕಾಶ ನೀಡಲಾಗಿದ್ದು, ಚಾಯ್ಸ್-4 ಮೂಲಕ ಕೆಇಎ ಕೌನ್ಸೆಲಿಂಗ್‌ನಿಂದ ಹೊರ ಹೋಗಲು ಅವಕಾಶ ಕಲ್ಪಿಸಲಾಗಿದೆ. ಇನ್ನು, ತೆರವಾಗುವ ಸೀಟುಗಳಿಗೆ ಮತ್ತೊಮ್ಮೆ ರೀ-ರನ್ ಸೀಟು ಹಂಚಿಕೆ ಮಾಡಲಾಗುತ್ತದೆ. ಬಳಿಕ ಅಂತಿಮ ಸೀಟು ಹಂಚಿಕೆ ಫಲಿತಾಂಶ ಪ್ರಕಟಿಸಲು ಕೆಇಎ ಸಿದ್ಧತೆ ನಡೆಸಿದೆ.