ಬೆಂಗಳೂರು ನಮ್ಮ ಸಂಸ್ಥೆಗಳ ವಾರ್ಷಿಕ ವಹಿವಾಟು 2,000 ಕೋಟಿ ರೂ.ಗೂ ಅಧಿಕವಿದೆ. ಹೀಗಿರುವಾಗ ಸಿಕ್ಕಿದೆ ಎನ್ನಲಾದ 2 ಕೋಟಿ ರೂ. ನಮಗೆ ದೊಡ್ಡ ಮೊತ್ತವೇ ಅಲ್ಲ ಎಂದು ಲೋಕೋಪಯೋಗಿ ಸಚಿವ ಸತೀಶ್‌ ಜಾರಕಿಹೊಳಿ(Satish Jarkiholi )ಹೇಳಿದ್ದಾರೆ.

ತಮ್ಮ ಹಾಗೂ ತಮ್ಮ ಕುಟುಂಬಸ್ಥರಿಗೆ ಸೇರಿದ ಸಂಸ್ಥೆಗಳ ಮೇಲೆ ಜಾರಿ ನಿರ್ದೇಶನಾಲಯ (ED) ನಡೆಸಿದ ದಾಳಿಯ ಕುರಿತು ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೊಳಿ ಪ್ರತಿಕ್ರಿಯೆ ನೀಡಿದ್ದಾರೆ. ಕೇಂದ್ರ ತನಿಖಾ ಸಂಸ್ಥೆಗಳ ದುರ್ಬಳಕೆ ಹಾಗೂ ದಾಳಿಯ ಹಿಂದಿನ ರಾಜಕೀಯ ಉದ್ದೇಶಗಳ ಕುರಿತು ಅವರು ತೀವ್ರ ಅಸಮಾಧಾನ ಹೊರಹಾಕಿದ್ದಾರೆ.

ದಾಳಿ ಕುರಿತು ಸ್ಪಷ್ಟನೆ ನೀಡಿದ ಸತೀಶ್ ಜಾರಕಿಹೊಳಿ ಆ 2 ಕೋಟಿ ರೂ. ಹಣ ನಮ್ಮದೇ, ಅದನ್ನು ಕಾನೂನುಬದ್ಧವಾಗಿ ಕ್ಲೈಮ್ ಮಾಡುತ್ತೇವೆ. ಆಫ್ರಿಕಾದಲ್ಲಿ ಮೈನಿಂಗ್ ಮತ್ತು ಟ್ರೇಡಿಂಗ್ ಕಂಪನಿ ಆರಂಭಿಸಲು ಯೋಜನೆ ರೂಪಿಸಿದ್ದೆವು. ಹೂಡಿಕೆ ಇನ್ನೂ ಆಗಿಲ್ಲ, ಮಾಡುವ ಪ್ರಕ್ರಿಯೆಯಲ್ಲಿದ್ದೇವೆ. ಇದೇ ವಿದೇಶಿ ಹೂಡಿಕೆ ವಿಚಾರ ಮುಂದಿಟ್ಟುಕೊಂಡು ದಾಳಿ ನಡೆಸಲಾಗಿದೆ. ಮಗ ಮತ್ತು ಮಗಳ ಹೆಸರಿನಲ್ಲಿ ಕಂಪನಿ ಮಾಡಿರುವುದು ನಿಜ. ಈ ಸಂಬಂಧ ಆದಾಯ ತೆರಿಗೆ (IT) ಇಲಾಖೆಗೆ ಈಗಾಗಲೇ ಎಲ್ಲಾ ದಾಖಲೆ ಒದಗಿಸಿದ್ದೇವೆ. ಇಡಿ ಕೇಳಿದಾಗಲೂ ಅಗತ್ಯ ದಾಖಲೆ ನೀಡುತ್ತೇವೆ ಎಂದು ವಿವರಿಸಿದರು.

ನಾನು ಎಲ್ಲಿಯೂ ಜಾತಿ ವಿಚಾರ ತಂದು ಸಮರ್ಥಿಸಿಕೊಳ್ಳುವುದಿಲ್ಲ. ತಪ್ಪು ಮಾಡಿದರೆ ಜಾತಿಯನ್ನು ತರಲು ಸಾಧ್ಯವಿಲ್ಲ. ನಾವು ಯಾವುದೇ ತಪ್ಪು ಮಾಡಿಲ್ಲ, ಹೀಗಾಗಿ ಇದನ್ನು ಸಂಪೂರ್ಣವಾಗಿ ಕಾನೂನಾತ್ಮಕವಾಗಿಯೇ ಎದುರಿಸುತ್ತೇವೆ ಎಂದು ಸ್ಪಷ್ಟಪಡಿಸಿದರು.